ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ..!
ಬಡವರ ಹೊಟ್ಟೆಯನು
ಬಡಿದು, ದಿನದ ಮಾಮೂಲು
ಕೇಳುವ ಪೋಲೀಸು ನಾನಲ್ಲ.
ಈಗಲೋ, ಆಗಲೋ
ಸಾಯುವ ರೋಗಿಯನು ಬಿಡದೇ,
ರಕ್ತ ಹೀರುವ ಡಾಕ್ಟರೂ ನಾನಲ್ಲ.
ಪ್ರಜಾಹಿತವ ಬದಿಗೊತ್ತಿ,
ಕೋಟಿಕೋಟಿ ಹಣ ಕೊಳ್ಳೆ ಹೊಡೆವ,
ಡೊಳ್ಳುಹೊಟ್ಟೆ ರಾಜಕಾರಣಿ ನಾನಲ್ಲ.
ಸಾವಿರಾರು ರೂಪಾಯಿ
ಪಗಾರ ಬಂದ್ರೂ, ಲಂಚಕ್ಕಾಗಿ
ಕೈಯೊಡ್ಡೋ, ಸರ್ಕಾರಿ ನೌಕರ ನಾನಲ್ಲ.
ಬಿಸಿಲು ಧೂಳಲ್ಲಿ ಕೂತು,
ಬೇಡಿ ಪಡೆದ ಚಿಲ್ಲರೆ ಕಾಸು,
ಸಾಕು ನನ್ ಹೊಟ್ಟೆ ತಣ್ಣಗಿಡಲು.
ಇರುಳೆಲ್ಲಾ ಸಿಹಿಗನಸು,
ಕಣ್ಗಳಲಿ ಸವಿ ನಿದಿರೆ ಸೊಗಸು,
ನಿಜ, ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ...!