Thursday, April 28, 2011

ಛೀ ಕಳ್ಳಾ..!!!



ಅಯ್ಯೋ ಬೇಸತ್ತು ಹೋಗಿತ್ತು
ಮನ, ಸಾಕುಸಾಕಾಗಿಹೋಗಿತ್ತು.
ನಿನ್ನ ಕೀಟಲೆಗಳಿಗೆ,
ನಿನ್ನ ತರಲೆ ಕಾಟಗಳಿಗೆ,
ಮೊದಲೆ ತಾಳ್ಮೆಯಿರದ ನನಗೆ,
ನಿನ್ನ ಕೊಂದುಬಿಡುವಟ್ಟು,
ಕೋಪ ಉಕ್ಕಿ ಬರುತ್ತಿತ್ತು..

ನೀ ಅದು ಏನು ಮಾಯೆ,
ಮಾಡಿದೆಯೋ ಏನೋ..?
ನೀನೀರದ ಹೊತ್ತಲ್ಲಿ ನಿನ್ನದೇ
ದಾರಿಯನು ನಾ ಕಾಯುತ್ತಿದ್ದೆ.
ನೀ ಬಂದ ಕ್ಷಣದಲಿ, ಕಾಟ
ತಾಳಲಾರದೆ ದೂರದಲ್ಲೆ ನಿಂತು,
ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ.

ಇದು ಸ್ನೇಹಾನೋ, ಪ್ರೀತಿನೋ
ನನಗೆ ತಿಳಿಯದ ಹಾಗಿದೆ..
ನನ್ನ ಕೋಪವನು ಕರಗಿಸುವ
ಶಕ್ತಿ, ಆ ನಿನ್ನ ನಗುವಿಗಿದೆ.
ನನಗೆ ನಿನ್ನಲಿ ಪ್ರೀತಿ ಮೂಡಿದೆ,
ಕಣೋ .. ನನಗೂ ಗೊತ್ತಿಲ್ಲದೆ.

ಸದಾ ನಿನ್ನ ಜೊತೆಯಲ್ಲಿರೋ
ಆಸೆ ಕಾಡುತಿದೆ ನನಗೆ.
ಹಸಿವೂ ಇಲ್ಲ, ನಿದಿರೆಯೂ ಇಲ್ಲ..
ನಿನ್ನ ನಗುಮೊಗವೇ ಕಾಣುತಿದೆ,
ಎಲ್ಲೆಲ್ಲೂ ಹಗಲಿರುಳು ನನಗೆ.
ನೀನೇ ನನ್ನವನಾಗಬೇಕು,
ಬಾಳಬೇಕು ನಾ, ಖುಷಿಯಾಗಿ ಹೀಗೆ.

ಆಹಾ...!!! ಮುಗುಳ್ನಗೆಯ ನೋಡು,
ಕೊನಗೂ ನನ್ನ ಹೃದಯ
ಕದ್ದುಬಿಟ್ಟೆಯಲ್ಲೋ... ಛೀ ಕಳ್ಳಾ..!!!

Sunday, April 17, 2011

ಯಾರಿಗೆ ಮುತ್ತು ಕೊಡಲಿ..?


ಯಾರಿಗೆ ಮುತ್ತು ಕೊಡಲಿ
ಗೆಳತಿ, ಯಾರಿಗೆ ಮುತ್ತು ಕೊಡಲಿ..?

ಆ ಸಂಜೆಯಲಿ, ತನು
ತಂಪಾಗಿಸಿ, ನಿನ್ನ
ನೆನಪನ್ನು ಹನಿಹನಿಯಾಗಿ ತಂದ
ಮಳೆಹನಿಗೆ ಮುತ್ತು ಕೊಡಲೇ..

ಅದೇ ದಿನ ರಾತ್ರಿಯಲಿ,
ಬೆಳದಿಂಗಳಲಿ, ಅಪ್ಸರೆಯಂತೆ ನಿನ್ನ
ರೂಪವನ್ನು ಕರೆತಂದ ಬೆಳಕು
ಚೆಲ್ಲಿದ ಚಂದ್ರಮನಿಗೆ ಮುತ್ತು ಕೊಡಲೇ..

ಮನಸಿಗೆ ಆಹ್ಲಾದಕರವಾಗಿ,
ನಿನ್ನ ನೆನಪನ್ನೆ ಅಲೆಅಲೆಯಾಗಿ
ಕರೆತಂದ ತಂಪು ತಂಗಾಳಿಗೆ
ನಾ ನೂರು ಮುತ್ತು ಕೊಡಲೇ...
ನನ್ನ ನಿದಿರೆಯ ಕೆಡಿಸಿ,
ನಿನ್ನ ಮುಂಗುರುಳ ಕಚಗುಳಿ ನೆನಸೋ,
ರಾತ್ರಿಯ ತಂಪಿಗೆ ಮುತ್ತು ಕೊಡಲೇ...

ಮನಸಲಿ ಏನೇ ಇದ್ದರೂ,
ಅದರಲಿ ನಿನ್ನ ಸೌಂದರ್ಯ ಬಿಂಬಿಸುತಾ,
ಕಾಡುವ ಕನಸುಗಳಿಗೆ ಮುತ್ತು ಕೊಡಲೇ..
ಎಷ್ಟೇ ಕೊಟ್ಟರೂ, ಬರಿದಾಗದು
ಗೆಳತಿ, ನನ್ನ ಮುತ್ತಿನ ಸಾಗರ.
ಆದರೂ ಇನ್ನೂ ಎಷ್ಟು ದಿನ,
ನಾ ಬಚ್ಚಿಟ್ಟುಕೊಳ್ಳಲಿ...

Friday, April 15, 2011

ಮಳೆ ನಿಂತ ಮೇಲೆ..


ಬಿಡದೆ.. ಧೋ..!! ಎಂದು
ಸುರಿವ ಮಳೆ ಬಿಡಬಾರದೇ ಬೇಗ
ಎಂದು ಮನ ಹಂಬಲಿಸುತ್ತಿತ್ತು.
ನನ್ನ ಯಾವ ಗೋಜಿಗೂ,
ತಲೆ ಕೆಡಿಸಿಕೊಳ್ಳದೆ ತನ್ನ
ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.

ತಲೆಯೆತ್ತಿ ನೋಡಿದರೆ,
ಆಗಸದ ತುಂಬೆಲ್ಲಾ ಕಪ್ಪನೆ ಮೋಡ.
ನಮ್ಮ ತೋಟದ ಮನೆಯ ಮಣ್ಣಿನ
ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.
ಮಣ್ಣಿನ ವಾಸನೆಯ ಜೊತೆ,
ಮೈದುಂಬಿ ನಿಂತ ವನಸಿರಿ ನೋಡ.
ಮರೆತು ನಲಿದಿದೆ ಮನ, ಎಲ್ಲಾ ದುಗುಡ.

ಮಲೆನಾಡ ವನಸಿರಿಯಂತೆ
ರೋಚಕ ಹೆಣ್ಣಿನ ಚೆಲುವು.
ಗಂಡಿನ ಪ್ರೀತಿಯ ವರ್ಷಧಾರೆ
ಸಿಕ್ಕಾಗಲೆ ತಾನೇ, ಆ ಚೆಂದಕೆ
ಇನ್ನಷ್ಟೂ ಮೋಹಕವು.

ಕೆಸರಲ್ಲಿ ಆಡಬೇಕೆಂಬ
ಆಸೆ ಕಾಡಿತ್ತು ಮಗುವಿನಂತೆ,
ಕಂಡವರು ನಕ್ಕಾರು,
ಎಂದು ಸುಮ್ಮನೆ ನಿಂತೆ.
ಅದೇಕೋ ಗೊತ್ತಿಲ್ಲ,
ಮಳೆ ನಿಂತ ಮೇಲೆ... ಮತ್ತೆ
ಮಳೆ ಬರಬಾರದೇ ಎಂದು
ನಾ ಕಾಯುತ್ತಾ.... ನಿಂತೆ..!!

Wednesday, April 6, 2011

ಈ ಸಂಜೆಯಲಿ..

ಅದೆಂತದೋ ಮೌನವಿತ್ತು
ನನಲ್ಲಿ, ಈ ದಿನ ಸಂಜೆಯಲಿ,
ಮನಸು ಸರಿಯಿರಲಿಲ್ಲ,
ಕಾರಣವೂ ತಿಳಿದಿರಲಿಲ್ಲ.
ಗೆಳೆಯರ ಜೊತೆ ಹೊರಟಿದ್ದೆ,
ಕಾರಣವಿರದೆ, ಕಾಡುತ್ತಿದ್ದ ಮೌನದಲಿ.

ಎಲ್ಲರ ಒತ್ತಾಯಕ್ಕಾಗಿ,
ದೋಣಿಯ ಏರಿ ಕುಳಿತೆ,
ಆಕಾಶವೆಲ್ಲ ಬಂಗಾರದಂತೆ
ಹೊಳೆಯುತ್ತಿತ್ತು, ರವಿಕಿರಣದಿಂದ.
ಬಲು ನಿಧಾನವಾಗಿ ಬರುತ್ತಿತ್ತು,
ಆ ನೀರಿನಲೆಗಳು...ಚೆಂದದಿಂದ

ನನಗೆ ತಿಳಿಯದೇ ನಾನು,
ಅಲೆಗಳ ಜೊತೆ ಕೈಸೇರಿಸಿದೆ.
ಅಷ್ಟೂ ಹೊತ್ತು ಕಾಡಿದ್ದ ಮೌನ,
ದೂರವಾಯ್ತು, ನನಗೂ ಗೊತ್ತಿಲ್ಲದೇ..
ಅದ್ಬುತ ಕ್ಷಣಗಳೋ, ಏನೋ,
ನನ್ನ ಮನ ಸೋತು ನೀರಾಗಿದೆ.

ತುಂಬಾ ಉಲ್ಲಾಸದಿಂದ
ಚೀರಾಡುತ್ತಿದ್ದೆ ಮಗುವಿನ ಹಾಗೇ,
ಈ ಸಂಜೆಗಿದು ಎಂಥಾ ಶಕ್ತಿ,
ನೋವೆಲ್ಲ ಸೆಳೆವುದು ಸೂಜಿಗಲ್ಲಿನ ಹಾಗೆ,
ಓ ದೇವರೇ.., ಈ ಸಂಭ್ರಮ,
ಸಂತಸ ಸದಾ ಇರಬಾರದೆ ಹೀಗೆ..

ನಯನ ಮನೋಹರ


ಯಾವ ಪದಗಳ
ಬಳಸಿ ಹೊಗಳಲಿ
ಕನ್ನಡತಿಯ ಕಣ್ಗಳ ಅಂದ,
ನಾ ಕಳೆದುಹೋದದ್ದೆ
ಗೊತ್ತಾಗಲಿಲ್ಲ, ಮೈಮರೆತು
ನಿಂತಾಗ ನೋಡುತ್ತಾ ಚೆಂದ.

ಕಾಮನಬಿಲ್ಲಿನಂತ
ಹುಬ್ಬುಗಳ ನಡುವಣ ಬಿಂದಿ,
ಆ ನಯನಗಳ ಅಂಚಲಿ
ಕಾಡಿಗೆಯ ಕಡುಗಪ್ಪು,
ಕಣ್ಣು ಮಿಟುಕಿಸದೇ ನೋಡುತ್ತಾ
ನಿಂತೆ, ನಾ ನಿನ್ನ ನೋಡಲು
ಬಂದ ಮೊದಲ ದಿನ.
ನನಗಂತೂ ಗೊತ್ತಿಲ್ಲ ಚೆಲುವೇ...
ನಿನಗೆ ಬಂಧಿಯಾದೆ ಹೇಗೆ..ನಾ..!!

ಕವಿ ನಾನಾಗಿ ಹೋದೆ
ಸಖಿ, ನಿನ್ನ ಕಣ್ಗಳನು ನೋಡುತ್ತಾ
ಅವುಗಳ ಬಣ್ಣನೆಯ ಮಾಡುತ್ತಾ..!!
ಕಾಡಿದೆ ಚೆಲುವೆ ನನಗೆ,
ನಿನ್ನ ಮನೋಹರ ಕಣ್ಣೋಟ.
ನೂರು ಜನುಮಗಳು
ಹೀಗೆಯೇ ಇರಲಿ, ಸವಿಯಬೇಕು
ನಿನ್ನ ನಯನಗಳ ಸವಿನೋಟ...

ನಯನ ಮನೋಹರ..
ನನ್ನವಳ ಚೆಲುವು..