ಓ ನನ್ನ ಇನಿಯಾ..
ನಾ ಪಡೆದು ತಂದ ಅದೃಷ್ಟದ
ಜೀವಂತ ಮೂರ್ತಿ ರೂಪ ನೀನು..!!
ಕೋಣೆಯಲಿ, ನನ್ನೊಡನೆ ನೀ
ರಮಿಸುವಾಗ, ಅತ್ತೆಯವರು ಕರೆದರೆಂದು
ನಾ ಹೊರಟು ನಿಂತಾಗ
ನಿನ್ನ ಕಣ್ಗಳಲಿ ಮೂಡುವ ಹುಸಿಕೋಪ
ನಂಗೆ ಬಲು ಇಷ್ಟ ಕಣೋ..
ಪ್ರತಿ ರಾತ್ರಿ ತಂಪಿನಲಿ
ದೀಪದ ನಸುಬೆಳಕಿನಲಿ,
ನಿನ್ನ ಮನ್ಮಥರೂಪ ಕಂಡಾಗ
ನಾ ಸೋತು ಹೋದೆ ಇನಿಯಾ.
ನನ್ನ ತುಟಿಯ ಜೇನು,
ಈ ಅಂತರಂಗದ ಪ್ರೀತಿ,
ಎಲ್ಲವೂ ನಿನಗಾಗಿಯೇ ಕಣೋ..
ಸಂಜೆ ಐದರ ನಂತರ
ನಿನಗಾಗಿ ಕಾದಿರುವೆ ಬಾಗಿಲಿನಲಿ
ನಿನ್ನ ಕೈ ಹಿಡಿದು, ಭುಜಕ್ಕೊರಗಿ
ಪಾರ್ಕಿನಲಿ ಸುತ್ತಾಡಬೇಕು ಎಂಬ
ಆಸೆ ಮೂಡುತಿದೆ ಕಣೋ ಮನಸಲಿ..
ಬಾ ಒಲವೇ..ಬಾ...
ಹುಣ್ಣಿಮೆಯ ರಾತ್ರಿಯಲಿ,
ಸುಂದರ ಪ್ರೇಮಕಾಶ್ಮೀರದಲಿ,
ಮೆಲ್ಲಗೆ ಸುರಿವ ಮಂಜಿನಂತೆ..
ಪ್ರತಿದಿನವೂ ಮರೆಯದೇ
ಬಾ.. ಒಲವೇ., ನನ್ನ ಕನಸಿನಲಿ..!
ಮೆತ್ತನೇ ಹೂಹಾಸಿಗಯೂ
ಕೂಡ ಮುಳ್ಳಾಗುವುದು.
ಎಂಥ ಗಾಢನಿದಿರೆಯೂ
ಕೂಡ ಮರೆಯಾಗುವುದು.
ಮಾಗಿಯ ಚಳಿಯು ಕೂಡ
ಬೇಸಿಗೆ ಬೇಗೆಯಂತೆ ಕಾಡುವುದು.
ಕನಸಿನಲೂ ಕೂಡ
ನೀನಿರದ ರಾತ್ರಿಯಲಿ..!!
ಆ ಹುಲ್ಲು ಹಾಸಿಗೆಯಲಿ,
ಚೆಲ್ಲಿದ ಬೆಳದಿಂಗಳಿನಲಿ,
ನಾ ಮಲಗಿರುವಾಗ ನಿನ್ನ ಮಡಿಲಿನಲಿ,
ಸ್ವರ್ಗಸುಖದ ಬಯಕೆ ಯಾಕೆ?
ಚೆಲುವೆ, ಹಾಗೆಯೇ ಇರುವಾಸೆ.
ಬಾನಲಿ ರವಿ ಮೂಡದಿರಲಿ..
ನೀ ಮರೆಯದೇ ಬಾ ಒಲವೇ,
ಪ್ರತಿ ರಾತ್ರಿ ಕನಸಿನಲಿ.
ಆ ಕನಸುಗಳೇ ನನಗೆ
ಉಸಿರು ಕಣೇ, ಚೆಲುವೆ
ನೀ ಬಂದು ಸೇರುವವರೆಗೆ
ನನ್ನ ಮನೆ ಅಂಗಳದಲಿ..!