Thursday, May 26, 2011

ಇನಿಯಾ..!! ನಿಮ್ಮ ಪ್ರೀತಿ..



ಕಾಡದಿರಲಿ ವಿರಹದ ಭೀತಿ,
ನನಗಂತು ಬೇಕು ಸದಾ,
ಇನಿಯಾ .. ನಿಮ್ಮ ಪ್ರೀತಿ..!!

ಮದುವೆಯಾದ ಹೊಸತರಲ್ಲಿ,
ನನ್ನ ನಡು ಹಿಡಿದು,
ತುಟಿಗೆ ತುಟಿಯೊತ್ತಿ ಅಂದು
ನೀವು ಕೊಟ್ಟ ಚುಂಬನಕೆ,
ನನ್ನ ಮೈಯೆಲ್ಲಾ ಕಂಪಿಸಿ,
ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,
ಏನಾಗುತಿದೆ ಎಂಬ ಅರಿವಿಲ್ಲದೇ,
ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,
ಅದ್ಯಾಕೊ ನನಗೂ ಗೊತ್ತಿಲ್ಲದೆ.

ಪ್ರತಿದಿನ ಸಂಜೆಯಲಿ, ನೀವು
ನನ್ನ ಹೆರಳ ಸರಿಸಿ, ಮುತ್ತಿಟ್ಟು
ಮಲ್ಲಿಗೆ ಹೂ ಮುಡಿಸುವ ಪರಿಗೆ,
ಎಳೆ ಮಗುವಿನಂತೆ ನಾನು,
ನಲಿದಾಡುತ್ತಿದ್ದೆ ನಿಮ್ಮ ತೋಳಲಿ,
ನೀವು ತೋರುವ ಅನಂತ ಪ್ರೀತಿಗೆ..

ಯಾವ ಜನುಮದ ಪುಣ್ಯವೋ,
ನಾ ಕಾಣೆ, ನನಗೆ ಸಾವೇ ಬರದಿರಲಿ..
ನನಗಂತೂ ಬೇಕು... ಸದಾ
ಇನಿಯಾ.. ನಿಮ್ಮ ಪ್ರೀತಿ..!!!

Sunday, May 8, 2011

ಅಮ್ಮಾ...ನನ್ನ ಪ್ರೀತಿಯ ಅಮ್ಮ



ಅಮ್ಮಾ ಎನ್ನೋ ಎರಡಕ್ಷರದಲಿದೆ
ಪ್ರೀತಿ-ವಾತ್ಸಲ್ಯ-ಮಮತೆಯ ಸಿರಿ,
ಆ ಸಿರಿಯ ತುಂಬಿದ ಹೃದಯವು
ನನ್ನ ಜೀವದಾತೆಯದು..,

ನನ್ನ ಕಣ್ಗಳಲಿ ನೀರು ಬಂದರೂ,
ನೀ ಪಡುವ ಹೃದಯದ ನೋವು,
ನಾ ತಪ್ಪು ಮಾಡಿದ ಕ್ಷಣದಲಿ
ಬೆತ್ತದೇಟು ಕೊಟ್ಟು, ಮತ್ತೊಮ್ಮೆ
ಅರಸಿ ಬಂದು, ಮಮತೆ ತೋರುವ
ನಿನ್ನ ಪ್ರೀತಿಗೆ ಸರಿಸಮಾನರುಂಟೆ..?

ನನ್ನ ಪ್ರತಿ ಹೆಜ್ಜೆಯನೂ ಸಹ
ಸೂಕ್ಷ್ಮದಿ ಗಮನಿಸಿ, ಸರಿಪಡಿಸಿ,
ನಾನಿಡುವ ಪ್ರತಿ ಹೆಜ್ಜೆಯಲೂ
ಗೆಲುವು ಉಂಟಾಗುವಂತೆ ಹರಸಿ
ಹಾರೈಸಿದ ನಿನ್ನ ಹೃದಯದಲಿ
ಬತ್ತದಾ ಪ್ರೀತಿ ಸರಿಸಮಾನರುಂಟೆ..?

ಇಂದು ನಾನು ಬುದ್ದಿವಂತನಾಗಿ,
ಏನಾದರೂ ಸಾಧಿಸದವನಾದರೆ,
ನಿನ್ನ ಹರಕೆಯ ಫಲವಷ್ಟೆ ಹೊರತು
ನನ್ನ ಅದೃಷ್ಟವೇನಲ್ಲ .. ನನ್ನಮ್ಮಾ..
ನೀ ತೋರುವ ಪ್ರೀತಿ, ಮಮತೆ,
ಮತ್ತ್ಯಾರಿಂದಲಾದರೂ ಪಡೆಯುವುದುಂಟೆ..?

ಅಮ್ಮಾ.. ನನ್ನ ಪ್ರೀತಿಯ ಅಮ್ಮ...