ಬಾರೋ ಮಳೆರಾಯ
ನಿಂಗಾಗಿ ಕಾದುಕಾದು
ಭೂತಾಯಿ ಒಡಲು ಹಿಂಗೋಯ್ತು.
ಮುಂಜಾನೆ ಹೊತ್ನಾಗೆ,
ನೇಗಿಲ ಹಿಡ್ಕಂಡು ಹೊಂಟು,
ಉಳುಮೆಯ ಮಾಡಿ
ಮೂಡಿದ್ದ ಹಚ್ಚಹಸಿರ ಪೈರು
ನಿಂಗಾಗಿ ಕಾದು ಕಾದು
ಒಣಗಿಹೋಯ್ತಲ್ಲೋ ಮಳೆರಾಯ.
ಹಟ್ಟಿಯಾಗ ಹಿಟ್ಟಿಲ್ಲ.,
ತೋಳ್ನಾಗ ಕಸುವಿಲ್ಲ..!
ನನ್ನ ಕಂದಮ್ಮಗೆ
ಹಸಿವ ಹಿಂಗಿಸಲು
ನನ್ನಾಕೆ ಎದೆಹಾಲು ಬತ್ತೈತೋ..!
ಆ ಗೋಳಾ ನೋಡಿ
ಕಣ್ಣಾಗೆ ನೀರು ಹರಿದೈತೋ.
ಬಡತನದಿ ಬೇಯ್ವ
ನಮಗೆ, ಗೌಡ್ತಿಯ ಸಾಲ,
ಈಸೊಂದು ನೋವ ನುಂಗಿ
ಕಳೆಯೋದು ಹ್ಯಾಂಗ ಕಾಲ,
ನೀನೊಮ್ಮೆ ಬಂದಾರೆ..
ಕೆರೆನೀರ ಕುಡಿದಾದ್ರು
ಜೀವ ಉಳಿಸ್ಕೋತೀವೋ..!
ನೀನೊಮ್ಮೆ
ಬಂದು ಬಿಡೋ ಮಳೆರಾಯ
ನನ್ನ ಎದೆ ತಂಪಾಯ್ತದೋ,
ಬಾರೋ ಮಳೆರಾಯ
ನಿಂಗಾಗಿ ನಾ ಕಾದುಕಾದು
ಸಾಕಾಯ್ತೋ.. ಈ ಜೀವಕ
ಬ್ಯಾಸರ ಬಂದೈತೋ..!
ಮುದ್ದುಕಂದಾ,
ಅಮ್ಮಾ ಎನಬಾರದೇ..
ನೀನೊಮ್ಮೆ ಅಮ್ಮಾ ಎನಬಾರದೇ?
ಅವನ್ಯಾರು
ಜವರಾಯ, ಕದ್ದೊಯ್ಯಲು
ನಿನ್ನ ಜೀವ
ಅವನಿಗೇನಿತ್ತು.
ನಿನ್ನ ಮೇಲೆ ಹಗೆ.
ಪ್ರತಿ ಕ್ಷಣ ಕಾಡಿದ್ದೆ,
ನಿನ್ನ ತುಂಟಾಟದಿಂದ
ನೀನಲ್ಲವೇ ನನ್ನ ಜೀವ.
ನಾ ಬಾಳಲಿ ಹೇಗೆ.
ನವಮಾಸಗಳಲಿ
ನಿನ್ನನು ನೆನೆನೆನೆದು
ಖುಷಿಪಡುತ್ತಿದ್ದ ಸಮಯ,
ಸ್ವರ್ಗದ
ಬಾಗಿಲು ತೆರೆದಂತಿತ್ತು
ಈ ಭುವಿಗೆ ನಿನ್ನ
ನಾ ಕರೆತಂದ ಸಮಯ.
ಮರೆತಿದ್ದೆ
ನನ್ನೆಲ್ಲ ನೋವನ್ನು,
ಕಂಡಾಗ ನಿನ್ನ ಮೊಗವು
ಈ ಮನಸು
ನಂದನವನವಾಗಿತ್ತು
ಕಣ್ತುಂಬಿಕೊಂಡಾಗ ನಿನ್ನ ನಗುವು
ಹಾಳುಬದುಕೇ
ಬೇಡ.. ಕಂದಾ ನನಗೆ.
ಇರಲಾರೆ ನಾ.. ನಿನ್ನ ಬಿಟ್ಟು
ಕಂದಾ..
ನನ್ನ ಮುದ್ದುಕಂದಾ
ಅಮ್ಮಾ ಎನಬಾರದೇ
ನೀನೊಮ್ಮೆ ಅಮ್ಮಾಎನಬಾರದೇ..?
ನೋವೆ,
ಅದೆಲ್ಲಿ ಅಡಗಿರುವೆ,
ಅದು ಹೇಗೆ ಬಂದಿರುವೆ,
ಮನದ
ಸಂತಸವನ್ನೆಲ್ಲಾ ನುಂಗಿ
ಹೀಗೇಕೆ ಕಾಡುವೆ.
ತೃಣಮಾತ್ರದಿ ಬಂದು,
ಬೃಹದಾಕಾರಾದಿ ಬೆಳೆದು,
ಕ್ಷಣಕ್ಷಣವೂ ಬಿಡದೇ
ಮನ ನೋಯಿಸುವೆ ಏಕೆ?
ಜೀವನ
ಸಾಕ್ಷಾತ್ಕಾರಕ್ಕಾಗಿ
ಹಗಲಿರುಳು ಕಂಡ
ಸಾವಿರ ಕನಸುಗಳನು
ಕ್ಷಣಮಾತ್ರದಲಿ
ನೀ ಮರೆಸುವೆ ಏಕೆ..?
ತಂದೆ ಮಮತೆಯ ನೋವು,
ತಾಯಿ ಕರುಳಿನ ನೋವು,
ಹೆಂಡತಿ ಕಣ್ಣೀರಿನ ನೋವು,
ಪ್ರೇಮಿಗಳ ವಿರಹದ ನೋವು,
ಆಪ್ತರ ಅಗಲುವಿಕೆಯ ನೋವು,
ಒಂದಲ್ಲ, ಎರಡಲ್ಲ,
ನೂರು ಬಗೆಯಾಗಿ ಬರುವೆ,
ನನ್ನಂತೆಯೇ
ನಲಿವ ಮನಸುಗಳ
ಹಿಡಿ ನೆಮ್ಮದಿಯನು
ಗಾಳಿಗೆ ತೂರುವೇ ಏಕೆ?
ನಿನ್ನನು ಪ್ರತಿದಿನ
ಅನುಭವಿಸುವುದಕ್ಕಿಂತ,
ಒಮ್ಮೆಲೆ ಸಾವು
ಬರಬಾರದೇ? ಎಂದು
ಕಾತರದಿ ಕಾಯುವಂತೆ
ನೀ ಮಾಡುವೆ ಏಕೆ..?
ಇಷ್ಟೆಲ್ಲಾ ಇಡಿಯಾಗಿ
ನೀ ಕಾಡುತ್ತಿದ್ದಾಗ,
ನನ್ನ ಅಂತರಂಗದಲ್ಲೆಲ್ಲೋ,
ಮೂಡಿದ ಆಶಾಭಾವ
ನನಗೆ ಹೇಳಿದ್ದೇನು ಗೊತ್ತಾ..?
"ಇದೆಲ್ಲಾ ನಿಂಗೆ ಯಾವ ಲೆಕ್ಕ..?"